Wednesday, December 26, 2007

kavana bhaaga 2

ಸ್ನೇಹ ಮಾಡಬೇಕಿಂತವಳ!
-----------------------

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

-ಸಂತ ಶಿಶುನಾಳ ಶರೀಫ


ಅ ಆ ಮತ್ತು....ಕವನ ಸಂಕಲನ - ಅಕ್ಷರ ಹೊಸ ಕಾವ್ಯ.
-----------------------------------------------------
ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ
ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ
ಒಲೆ ಉರಿಯುತ್ತಿತ್ತು
ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ
ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ
ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು

ಅವ್ವನ ಎದೆ ಗೂಡೊಳಗೆ
ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು
ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ
ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ
ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.

ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು
ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು
ಅಸ್ಥಿ ಪಂಜರಗಳ ಪಾತಾಲದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದುವು

ಹುಡುಕುತ್ತಾ ಹುಡುಕುತ್ತಾ
ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ
ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ
ಮೀಸೆ ಬೆಳೆದು ಅಡರಿಸಿಕೊಂಡು
ಕತ್ತಲಲ್ಲಿ ಕಾಣದಾದೆ

ಆದರೆ
ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ
ಅ ಆ ಮೂಡಿಸಿದಾಗ ಅಂದು
ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ
ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.

- ಎಚ್ ಗೋವಿಂದಯ್ಯ.



ಯಾಕೋ ಅಕ್ಷರಗಳೆಲ್ಲ ಒದ್ದೆ.
--------------------------
ಪ್ರೀಯಾ
ನಮ್ಮ ಪ್ರೀತಿ
ಶಬ್ದಗಳ ಹಂಗಿಗೆ ಒಳಪಡಲಿಲ್ಲ...
ಸ್ಪರ್ಶದ ಹಂಬಲಕ್ಕೆ ಹಾತೊರೆಯಲಿಲ್ಲ...
ಆದರೂ, ನೀನು ಪ್ರತಿರಾತ್ರಿ
ನನ್ನ ಕನಸುಗಳ ದರಬಾರಿಗೆ
ಬರುವುದನ್ನ ತಡೆಯಲು
ಯಾರಿಂದಲೂ ಸಾಧ್ಯವಾಗಲಿಲ್ಲ.

ಈ ಬೆಳಗು
ಮೆಟ್ಟಿಲೇರುವಾಗ
ನಿನ್ನ ಧ್ಯಾನದಲ್ಲಿ ಕಾಲಿ ಜಾರಿ
ಮತ್ತೆ ಕಂಪಿಸಿದೆ...

ನಿನ್ನನ್ನು ಇಡಿಯಾಗಿ ಕ್ಷಣಕ್ಷಣವೂ ಪ್ರೀತಿಸಬೇಕೆಂದಿದ್ದೇನೆ
ಕಾಲನೂ ಸೋಲಬೇಕು ಹಾಗೆ

ಅವನ ನಿರ್ದಯಿ ಹೆಜ್ಜೆ
ನಮ್ಮ ಮನೆಯ ಬಾಗಿಲಿಗೆ ಬಂದರೆ
ನನ್ನ ಜೀವ ನಿನ್ನೊಳಗೆ
ನಿನ್ನ ಜೀವ ನನ್ನೊಳಗೆ ಇರುವುದ ಕಂಡು
ಕಾಲನೆ ಕಾಲು ಕಿತ್ತಬೇಕು ಹಾಗೆ.

-ಜಯಂತ ಕಾಯ್ಕಿಣಿ.

1 comment:

Unknown said...

ಅ ಆ ಮತ್ತು....ಕವನ ಸಂಕಲನದ ಮೊದಲ ಪ್ಯಾರ ಏನಿದೆ ಅದು ತುಂಬಾ ಅರ್ಥ ಪುರ್ಣವಾಗಿದೆ.ತುಂಬಾ ಸುಂದರವಾಗಿದೆ.